ಚಂಪಾ 2

ಬಿಹಾರ ರಾಜ್ಯದ ಭಾಗಲ್‍ಪುರದಿಂದ ಪಶ್ಚಿಮಕ್ಕೆ ಸುಮಾರು 4 ಮೈಲಿ ದೂರದಲ್ಲಿರುವ ಒಂದು ಪ್ರಾಚೀನ ನಗರ; ಭಾಗಲ್ ಪುರದ ಬಳಿ ಹರಿಯುವ ಒಂದು ನದಿ. ಚಂಪಾ ನಗರ ಹಿಂದೆ ಲೋಮಪಾದರಾಜನ ರಾಜಧಾನಿಯಾಗಿತ್ತೆಂದು ರಾಮಾಯಣದಿಂದ ತಿಳಿದುಬರುತ್ತದೆ. ಹಿಂದೆ ಇದಕ್ಕೆ ಮಾಲಿನೀ ಎಂದು ಹೆಸರಿತ್ತೆಂದೂ ಅನಂತರ ಇಲ್ಲಿ ಚಂಪಾ ದೊರೆ ಆಳುತ್ತಿದ್ದದ್ದರಿಂದ ಚಂಪಾಪುರಿ, ಚಂಪಾನಗರ ಎಂಬ ಹೆಸರು ಪ್ರಾಪ್ತವಾಯಿತೆಂದೂ ಹೇಳಲಾಗಿದೆ. ಚಂಪಕ ವೃಕ್ಷಗಳು ಇದರ ಸುತ್ತ ಹೇರಳವಾಗಿ ಬೆಳೆಯುವುದರಿಂದ ಈಗಿನ ಹೆಸರು ಬಂದಿರಬಹುದೆಂದು ಒಂದು ಊಹೆ. ಮಹಾಭಾರತ ಕಾಲದಲ್ಲಿ ದುರ್ಯೋಧನ ಕರ್ಣನನ್ನು ಅಂಗದೇಶಾಧಿಪತಿಯನ್ನಾಗಿ ಮಾಡಿದಾಗ ಆ ದೇಶದ ರಾಜಧಾನಿಯಾಗಿದ್ದ ಕರ್ಣಪುರಿಯೇ ಈಗಿನ ಚಂಪಾನಗರವೆಂದು ಹೇಳಲಾಗಿದೆ.

ಜೈನ ಔಪಪತ್ತಿಕ ಸೂತ್ರದಲ್ಲಿ ಈ ನಗರವನ್ನು ಪೃಥ್ವಿಯ ಮೇಲಿನ ಸ್ವರ್ಗ ಎಂದು ವರ್ಣಿಸಲಾಗಿದೆ. 12ನೆಯ ತೀರ್ಥಂಕರನಾದ ವಾಸುಪೂಜ್ಯ ಹುಟ್ಟಿದ ಸ್ಥಳ ಚಂಪಾ ; ಆತನಿಗೆ ಕೇವಲ ಜ್ಞಾನವೂ ನಿರ್ವಾಣವೂ ಇಲ್ಲಿ ಪ್ರಾಪ್ತವಾದುವೆಂದು ಹೇಳಲಾಗಿದೆ. ಮಹಾವೀರನ ಶಿಷ್ಯ ಚಂದನವಾಲಾ ಇಲ್ಲಿಯೇ ಹುಟ್ಟಿದ. ಕರಕಂಡೂ ಎಂಬ ರಾಜ ಇಲ್ಲಿ ಪಾಶ್ರ್ವನಾಥ ಮೂರ್ತಿಯನ್ನು ಸ್ಥಾಪಿಸಿದನೆನ್ನಲಾಗಿದೆ. ಶ್ರೇಣಿಕ ರಾಜನ ಮಗನಾದ ಕುಣಿಕನೆಂಬುವನು ರಾಜಗೃಹವನ್ನು ಬಿಟ್ಟು ಚಂಪಾವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದು ತಿಳಿದುಬರುತ್ತದೆ.
ಚಿಂಪಾನದಿಗೆ ಹಿಂದೆ ಮಾಲಿನೀ ಎಂದೂ ಹೆಸರಿತ್ತು. ಕಾಳಿದಾಸನ ಶಾಕುಂತಲದಲ್ಲಿ ಕಣ್ವ ಋಷಿಯ ಆಶ್ರಮ ಮಾಲಿನೀ ತೀರದಲ್ಲಿದ್ದ ವಿಚಾರ ಬರುತ್ತದೆ. ಇದೊಂದು ಪವಿತ್ರ ನದಿಯೆಂದು ಪದ್ಮಪುರಾಣದಲ್ಲಿ ವರ್ಣಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ